Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪೆಂಟಗನ್ ಚಿಂತನೆಗೆ ಹಚ್ಚುವ ಐದು ಕಥೆಗಳು - 3.5/****
Posted date: 08 Sat, Apr 2023 08:59:59 AM
ಸಿನಿಮಾ ಈಗ ಬರೀ ಮನರಂಜನಾ ಮಾದ್ಯಮವಾಗಿ ಉಳಿದಿಲ್ಲ, ಜನರಲ್ಲಿ ಜಾಗೃತಿ ಮೂಡಿಸುವ, ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದೆ.ಹೊಸಹೊಸ ಪ್ರಯೋಗಗಳಿಗೆ ನಾಂದಿ ಹಾಡಿದೆ. 
 
ಪುಟ್ಟಣ್ಣ ಕಣಗಾಲರು ಆಗಲೇ  3 ಬೇರೆಬೇರೆ ಕಥೆಗಳನ್ನಿಟ್ಟುಕೊಂಡು  ಕಥಾಸಂಗಮ ಎಂಬ ಅಂಥಾಲಜಿ ಸಿನಿಮಾ ಮಾಡಿದ್ದರು. ಈಗ ನಿರ್ದೇಶಕ  ಗುರು ದೇಶಪಾಂಡೆ ಅವರು ಪೆಂಟಗನ್ ಮೂಲಕ ಅಂಥದೊಂದು  ಪ್ರಯತ್ನ ಮಾಡಿ ಗೆದ್ದಿದ್ದಾರೆ.  ಬೇರೆ ಬೇರೆ ಜಾನರ್‌ನ ಐದು ಕಥೆಗಳನ್ನು ಪೆಂಟಗನ್ ಚಿತ್ರದ ಮೂಲಕ  ತೆರೆಯ ಮೇಲೆ ತಂದಿರುವ ಗುರು ದೇಶಪಾಂಡೆ ಅವರ ಪ್ರಯತ್ನ ಜನರನ್ನು ಸೆಳೆಯುತ್ತಿದೆ. ಐದು ಕಥೆಗಳನ್ನು ಒಳಗೊಂಡ ಅಂಥಾಲಜಿ ಸಿನಿಮಾ ಇದಾಗಿದ್ದು, ಈ ಚಿತ್ರವನ್ನು  ಗುರು ದೇಶಪಾಂಡೆ  ಅವರು   ನಿರ್ಮಿಸಿದ್ದಾರೆ. ಆಕಾಶ್ ಶ್ರೀವತ್ಸ , ಚಂದ್ರಮೋಹನ್, ರಾಘು ಶಿವಮೊಗ್ಗ , ಕಿರಣ್‌ಕುಮಾರ್ ಹಾಗೂ ಗುರು ದೇಶಪಾಂಡೆ ಹೀಗೆ 5 ಜನ ನಿರ್ದೇಶಕರು ಐದು ಕಥೆಗಳನ್ನು ನಿರೂಪಿಸಿದ್ದಾರೆ. 
 
ಅದರಲ್ಲಿ ಮೊದಲನೆಯದು ಗ್ರೂಫೀಸ್ ಕೆಫೆ. ಇದರ ನಾಯಕ  ಭಗ್ನ‌ ಪ್ರೇಮಿ. ಲವ್ ಮಾಡಿದ ಹುಡುಗಿ ಕೈಕೊಟ್ಟಳೆಂದು  ಸೂಸೈಡ್ ಮಾಡಿಕೊಳ್ಳಲು ನಿರ್ಧರಿಸುತ್ತಾನೆ.   ಬೆಟ್ಟದಿಂದ ಹಾರಿ ಸಾಯಲು ಹೋಗುತ್ತಾನೆ.  ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ಧೈರ್ಯವಿಲ್ಲದೆ  ತನ್ನನ್ನು ಕೊಲೆಮಾಡಲು  ಕಿಲ್ಲರ್ ಒಬ್ಬನಿಗೆ  ಸುಪಾರಿ  ನೀಡುತ್ತಾನೆ. ಆತ ಬರುವ ಲೊಕೇಶನ್ ಸಹ ಕೊಡುತ್ತಾನೆ. ಅದು ಮಿ.ಗ್ರೂಫಿ ಕೆಫೆ. ತನ್ನ ಹಣ, ಒಡವೆ, ಆಸ್ತಿಯನ್ನು ಎಲ್ಲರಿಗೂ ದಾನಮಾಡಿ ಆ ಕೆಫೆಗೆ ಬರುತ್ತಾನೆ, ಅಲ್ಲಿ ನಡೆಯುವ ಘಟನೆಗಳೇ ಇದರ ಕ್ಲೈಮ್ಯಾಕ್ಸ್. ಸುಪಾರಿ ಕಿಲ್ಲರ್ ಪಾತ್ರ ಮಾಡಿರುವ  ಪ್ರಮೋದ್ ಶೆಟ್ಟಿ ಬಿಟ್ಟರೆ  ಇದರಲ್ಲಿ ಬಹುತೇಕರು ಹೊಸಬರು. ನಿರ್ದೇಶಕ ಚಂದ್ರಮೋಹನ್ ಅಚ್ಚುಕಟ್ಟಾಗಿ ಈ  ಚಿತ್ರವನ್ನು  ತಂದಿದ್ದಾರೆ.
 
ಆಕಾಶ್ ಶ್ರೀವತ್ಸ ನಿರ್ದೇಶನದ ಚಿತ್ರ ಮೈಸೂರುಪಾಕ್‌. ಇದರಲ್ಲಿ  ಹಿರಿಯರ  ಬಗ್ಗೆ ಕಿರಿಯರಿಗೆ ಸಂದೇಶ ಹೇಳಲಾಗಿದೆ. ನಿವೃತ್ತ ಮೇಷ್ಟರು ಮನೆಯಲ್ಲಿ  ಮಗ, ಸೊಸೆ ಮೊಮ್ಮಗಳು  ಇದ್ದರೂ  ಮಾವನನ್ನು ನೋಡಿಕೊಳ್ಳಲು ಗೊಣಗಾಡುವ  ಸೊಸೆ, ವಯಸ್ಸಾದಂತೆ ಮಕ್ಕಳಾಗುವ ಹಿರಿಯರು. ಆ ಜೀವಕ್ಕೆ  ತನ್ನನ್ನು ಪ್ರೀತಿಸುವವರಿಲ್ಲ ಎಂಬ ಕೊರಗು. ಬದುಕಿದ್ದಾಗಲೇ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳುವ  ಈ ಚಿತ್ರದಲ್ಲಿ  ಹಿರಿಯ ಜೀವವಾಗಿ ಬಿರಾದರ್ ಹಾಗೂ ಮೊಮ್ಮಗಳಾಗಿ ಬೇಬಿ ಆರಾಧ್ಯ ಗಮನ ಸೆಳೆಯುತ್ತಾರೆ. 
 
ಹರೆಯದಲ್ಲಿ ಹುಟ್ಟುವ  ಕಾಮನೆಗಳು, ಹೆಣ್ಣಿನ ಮೇಲಿನ ವ್ಯಾಮೋಹ, ಸುಖ, ಡೇಟಿಂಗ್ ಆಪ್‌ಗಳ ವಂಚನೆ  ಇದನ್ನೆಲ್ಲ ಇಟ್ಟುಕೊಂಡು  ರಾಘು ಶಿವಮೊಗ್ಗ ಅವರು ಕಾಮಾತುರಾಣಾ  ನ ಭಯಂ  ನಲಜ್ಜ ಎಂಬ ಕಥೆಯನ್ನು ಹೇಳಿದ್ದಾರೆ. 
 
ಏನೂ ಗೊತ್ತಿಲ್ಲದ ಹರೆಯದ ಯುವಕನಿಗೆ  ಮನೆಯ ಮಾಲಕಿ ಜಸ್ಸಿ(ತನಿಷಾ) ಡೇಟಿಂಗ್ ಆಪ್ ಪರಿಚಯಿಸಿ ಹೆಣ್ಣಿನ ಮೇಲೆ ಮೋಹ ಹುಟ್ಟುವಂತೆ ಮಾಡುತ್ತಾಳೆ, ಗಂಡನಿಂದ ದೂರವಾಗಿದ್ದ ಜಸ್ಸಿ ಈ ಹುಡುಗನ ಮೂಲಕ ತನ್ನ ದೇಹದ ಕಾಮನೆಗಳನ್ನು ಈಡೇರಿಸಿಕೊಳ್ಳುತ್ತಾಳೆ.  ಹಲವು ಏರಿಳಿತಗಳ ನಡುವೆ ಒಮ್ಮೆ ಜಸ್ಸಿಯ ಕೊಲೆ ನಡೆಯುತ್ತದೆ. ಈ ಕೊಲೆ ಮಾಡಿದವರು ಯಾರು ? ಡೇಟಿಂಗ್ ಆಪ್ ಜಾಲ ಹೇಗೇಗೆಲ್ಲ ಅಮಾಯಕರನ್ನು ಬಲೆಗೆ ಬೀಳಿಸಿಕೊಳ್ಳುತ್ತದೆ ಎಂಬುದನ್ನು  ಈ ಚಿತ್ರದಲ್ಲಿ ಹೇಳಲಾಗಿದೆ. ನಾಯಕಿ  ತನಿಷ ಕುಪ್ಪಂದ ಚಿತ್ರದಲ್ಲಿ ಬೋಲ್ಡಾಗಿಯೇ  ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಪ್ರಕಾಶ್ ಬೆಳವಾಡಿ  ನಟಿಸಿದ್ದಾರೆ. ನಿರ್ದೇಶಕ ರಾಘು ಶಿವಮೊಗ್ಗ  ಈ ಕಥೆಗಾಗಿ ತುಂಬಾ ಎಫರ್ಟ್ ಹಾಕಿದ್ದಾರೆ. ಇನ್ನು ಮೂರನೇ ಕಾನ್ಸೆಪ್ಟ್ ದೋಣಿಸಾಗಲಿ ಮುಂದೆ ಹೋಗಲಿ. ಮೇಲು ಕೀಳು, ಬಡವ ಬಲ್ಲಿದರ ನಡುವೆ ನಡೆಯೋ ಕಥೆ.
 
ತೋಟದ ಮಾಲೀಕನ  ದೌಲತ್ತು(ರವಿಶಂಕರ್), ಕೆಲಸದಾಳುಗಳನ್ನು ತುಚ್ಚವಾಗಿ ಕಾಣುವ ಆತನ  ವ್ಯಕ್ತಿತ್ವ. ಆತನ ಮಗಳಿಗಾದರೋ  ಕಾರ್ಮಿಕ ಮಾರನ ಮೇಲೆ ಪ್ರೀತಿ,  ಪಾರ್ವತಿ (ಕೃತಿಕಾ ದೇಶಪಾಂಡೆ) ತೋಟದಲ್ಲಿ ಕೂಲಿ ಮಾಡುತ್ತಲೇ  ದಿಕ್ಕಿಲ್ಲದ ಮಾರನನ್ನು  ಸಾಕಿ ತಮ್ಮನಂತೆ ನೋಡಿಕೊಂಡಿರುತ್ತಾಳೆ.ಆಕೆಯೆಂದರೆ ಕಾರ್ಮಿಕರಿಗೆಲ್ಲ ಅಚ್ಚುಮೆಚ್ಚು.  ಇದರ ನಡುವೆ  ಪ್ರೀತಿಸುವ ಜೋಡಿ.  ಜಾತಿ ಯಾವುದೇ ಇರಲಿ, ಸತ್ತಮೇಲೆ  ಎಲ್ಲರೂ ಸೇರುವುದು ಒಂದೆಡೆ ಎಂದು ನೀತಿ ಹೇಳುವ  ಈ  ಕಾನ್ಸೆಪ್ಟ್ ನ್ನು ಕಿರಣ್‌ಕುಮಾರ್  ನಿರೂಪಿಸಿದ್ದಾರೆ. 
 
ಕೊನೆಯ ಕಥೆ ಕರ್ಮ. ಇದನ್ನು ಗುರು ದೇಶಪಾಂಡೆ ಅವರೇ ನಿರ್ದೇಶನ ಮಾಡಿದ್ದಾರೆ. ನಾವು ಮಾಡಿದ ಪಾಪ, ಪುಣ್ಯ, ಕರ್ಮ ಯಾವತ್ತೂ ನಮ್ಮನ್ನು ಬಿಡದು. ಅದರ ಫಲ ಅನುಭವಿಸಲೇಬೇಕು ಎನ್ನುವುದು ಇದರ ತಾತ್ಪರ್ಯ,  ಮಾಜಿ ಡಾನ್ ರಾಮಚಂದ್ರಪ್ಪ  ಹಿಂದೆ ಮಾಡುತ್ತಿದ್ದ ಕೆಲಸಗಳನ್ನೆಲ್ಲ ಬಿಟ್ಟು  ಕನ್ನಡಕ್ಕಾಗಿ  ಹೋರಾಟ ನಡೆಸುತ್ತಿರುತ್ತಾನೆ. ಆದರೂ ಹಿಂದೆ ಆತ ಮಾಡಿದ ಒಂದು ಪಾಪಕ್ಕೆ ಪ್ರಾಯಶ್ಚಿತ್ತ ಅನುಭವಿಸಲೇಬೇಕಾಗುತ್ತದೆ. ಇಲ್ಲಿ ಹೋರಾಟಗಾರನಾಗಿ  ಕಿಶೋರ್ ಪ್ರಬುದ್ದ ಅಭಿನಯ ನೀಡಿದ್ದಾರೆ. 5 ಕಥೆಗಳಿಗೆ  ಸಂಗೀತ  ಒದಗಿಸಿರುವ ಮಣಿಕಾಂತ್ ಕದ್ರಿ ಅವರ ಕೆಲಸ ಸೊಗಸಾಗಿದೆ. ಹಾಡುಗಳು ಮತ್ತೆ ಮತ್ತೆ  ಕೇಳುವಂತಿವೆ. ಐದು ಕಥೆಗಳನ್ನು ಬೇರೆ ಬೇರೆ ಕಲರ್ ನಲ್ಲಿ ಮೂಡಿಸಿರುವ ಕ್ಯಾಮೆರಾ ವರ್ಕ್  ಇಡೀ ಚಿತ್ರದ ಪ್ಲಸ್ ಪಾಯಿಂಟ್. ವಿಶೇಷವಾಗಿ  5 ಕಥೆಗಳಲ್ಲೂ ಸಾವಿನ ಮೂಲಕವೇ ಮೆಸೇಜ್ ಹೇಳಲಾಗಿದೆ. ಮನರಂಜನೆಯ ಜೊತೆಗೆ ಚಿಂತನೆಗೆ ಹಚ್ಚುವ ಚಿತ್ರವಿದು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪೆಂಟಗನ್ ಚಿಂತನೆಗೆ ಹಚ್ಚುವ ಐದು ಕಥೆಗಳು - 3.5/**** - Chitratara.com
Copyright 2009 chitratara.com Reproduction is forbidden unless authorized. All rights reserved.